ಮೂವತ್ತಾರು ತತ್ತ್ವಗಳು - 
ಶೈವ ಸಿದ್ಧಾಂತಗಳಲ್ಲಿ ಉಕ್ತವಾಗಿರುವ ತತ್ತ್ವಗಳು. ಇವುಗಳ ಜ್ಞಾನದಿಂದ ಮನುಷ್ಯ ತಾನು ಯಾರು ಎಂಬುದನ್ನು ಅರಿತು ತನ್ನ ಅಂತಃಶಕ್ತಿಗಳನ್ನು ಬೆಳೆಸಿಕೊಂಡು ಸಾಮರಸ್ಯ ಹೊಂದುವನೆಂಬ ನಂಬಿಕೆ. ಇವುಗಳಲ್ಲಿ 25 ತತ್ತ್ವಗಳನ್ನು ಆತ್ಮಶಕ್ತಿಗಳೆಂದು ಕರೆಯಲಾಗಿದೆ. ಇವುಗಳ ಜ್ಞಾನದಿಂದ ಮನುಷ್ಯ ತನ್ನನ್ನು ತಾನು ತಿಳಿಯಲು ಅವಕಾಶವಾಗುತ್ತದೆ. ಐದು ಕರ್ಮೇಂದ್ರಿಯಗಳು. ಐದು ಜ್ಞಾನೇಂದ್ರಿಯಗಳು. ಐದು ಪ್ರಾಣಾದಿ ವಾಯುಗಳು. ಐದು ಶಬ್ದಾದಿ ವಿಷಯಗಳು, ನಾಲ್ಕು ಚಿತ್ತ ಮನ ಬುದ್ಧಿ ಅಹಂಕಾರಗಳು ಮತ್ತು ಜೀವ ಒಬ್ಬ__ಹೀಗೆ 25 ತತ್ತ್ವಗಳು.

	ಮೂವತ್ತಾರು ತತ್ತ್ವಗಳು ಹೀಗಿವೆ : ಶುದ್ಧತತ್ತ್ವಗಳು ಐದು: ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧ ವಿದ್ಯಾ, ಮಿಶ್ರ ತತ್ತ್ವಗಳು ಆರು: ಮಾಯ, ಕಾಲ, ನಿಯತಿ, ಕಲಾ, ವಿದ್ಯಾ, ರಾಗ. ಅಶುದ್ಧ ತತ್ತ್ವಗಳು ಇಪ್ಪತ್ತೈದು:

	ಅಂತಃಕರಣಗಳು 5: ಪುರುಷ, ಪ್ರಕೃತಿ, ಅಹಂಕಾರ, ಬುದ್ಧಿ, ಮನಸ್ಸು.
	ಜ್ಞಾನೇಂದ್ರಿಯಗಳು 5: ಶ್ರೋತ್ರ, ತ್ವಕ್, ಚಕ್ಷು, ಜಿಹ್ವಾ, ಘ್ರಾಣ.
	ಕರ್ಮೇಂದ್ರಿಯಗಳು 5: ವಾಕ್, ಪಾಣಿ, ಪಾದ, ಪಾಯು, ಉಪಸ್ಥ.
	ತನ್ಮಾತ್ರಗಳು 5: ಶಬ್ದ, ಸ್ಪರ್ಶ, ರೂಪ, ರಸ, ಗಂಧ.
	ಭೂತಗಳು 5: ಆಕಾಶ, ವಾಯು, ವಹ್ನಿ, ಜಲ, ಭೂಮಿ.
	  (ಎಂ.ಜಿ.ಎನ್.)

	ಈ ಪ್ರಪಂಚ 36 ತತ್ತ್ವಗಳಿಂದ ಕೂಡಿದೆ ಎಂದು ಶೈವಧರ್ಮದವರ ನಂಬಿಕೆ. ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಳಯಗಳು ಈ ಮೂವತ್ತಾರು ತತ್ತ್ವಗಳಿಂದ ನಡೆಯುತ್ತಿರುತ್ತದೆ. ಇವುಗಳಲ್ಲಿ ಮೊದಲನೆಯ ಐದು ತತ್ತ್ವಗಳು ಶುದ್ಧಾಧ್ವಗಳೆಂದೂ ಉಳಿದವು ಅಶುದ್ಧಾಧ್ವಗಳೆಂದೂ ಪರಿಗಣಿಸಲ್ಪಟ್ಟಿವೆ. ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧವಿದ್ಯಾ ಇವೇ ಮೊದಲ ಐದು ತತ್ತ್ವಗಳು. ಶಿವತತ್ತ್ವದಲ್ಲಿ ಶುದ್ಧ ಚಿದ್ರೂಪವಾದ ಪೂರ್ಣಹಂತಾನುಭವ. ಶಕ್ತಿತತ್ತ್ವದಲ್ಲಿ ಇಚ್ಛಾಜ್ಞಾನ, ಕ್ರಿಯಾಶಕ್ತಿಗಳ ಸ್ಫುರಣ. ಉಳಿದ ಸದಾಶಿವ, ಈಶ್ವರ, ಶುದ್ಧವಿದ್ಯಾ ತತ್ತ್ವಗಳಲ್ಲಿ ಗ್ರಾಹ್ಯ ಗ್ರಾಹಕಗಳ ನಿಷ್ಪತ್ತಿ.

	ಅಶುದ್ಧಾಧ್ವಗಳಲ್ಲಿ ಮೊದಲ ತತ್ತ್ವ ಮಾಯಾ, ಮಾಯೆ ಪರಮೇಶ್ವರನ ಶಕ್ತಿ, ಮಾಯೆ ಪದಾರ್ಥಗಳ ನಿಜಸ್ವರೂಪವನ್ನು ಮರೆಸಿ ಭೇದಜ್ಞಾನವನ್ನುಂಟು ಮಾಡುತ್ತದೆ. ಚಿದ್ರೂಪವನ್ನು ಭಿನ್ನವಾಗಿಯೂ ಚಿತ್ತನ್ನು ಅಚಿತ್ತನ್ನಾಗಿಯೂ ತೋರಿಸುತ್ತದೆ. ನಾನು ಎಂಬ ಅಹಂ ಈ ಮಾಯೆಯ ಪ್ರಭಾವ. ಶಿವನ ಸರ್ವಕರ್ತೃತ್ವ, ಸರ್ವಜ್ಞತ್ವ, ಪೂರ್ಣತ್ವ, ನಿತ್ಯತ್ವ, ವ್ಯಾಪಕತ್ವ, ಎಂಬ ಶಕ್ತಿಗಳು ಸಂಕೋಚವಾಗಿ ಕ್ರಮೇಣ ಪಂಚ ಕಂಚುಕಗಳಾಗುತ್ತವೆ. ಇದೂ ಮಾಯೆಯ ಪ್ರಭಾವ. ಮಾಯೆ ಮತ್ತು ಪಂಚ ಕಂಚುಕಗಳಿಂದ ಕೂಡಿದವ ಪುರುಷ. ಅವನೇ ಜೀವಾತ್ಮ, ಇವನಿಗೆ ಸತ್ವರಜಸ್ತಮಸ್ಸುಗಳ ಪ್ರಭಾವದಿಂದ ಕೂಡಿದ ಇಂದ್ರಿಯ ಮತ್ತು ಅಂತಃಕರಣಗಳನ್ನು ಒದಗಿಸುವುದೇ ಪ್ರಕೃತಿ. ಪ್ರಕೃತಿಯಿಂದ ಕೆಳಗೆ ಮಹತ್ತು, ಅಹಂಕಾರ ಎರಡು ತತ್ತ್ವಗಳು. ಅಹಂಕಾರ ತತ್ತ್ವದಿಂದ ಹುಟ್ಟುವ ತತ್ತ್ವಗಳು ಮನಸ್ಸು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಪಂಚತನ್ಮಾತ್ರಗಳು ಹಾಗೂ ಪಂಚಭೂತಗಳು. ಈ ತತ್ತ್ವಗಳ ಸಮಗ್ರ ಅರಿವಿನಿಂದ ಜಿಜ್ಞಾಸು ವ್ಯವಹಾರ ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳೂ ಸುಖದುಃಖಗಳೂ ಮಾಯೆಯ ತತ್ತ್ವ ಪ್ರಭಾವದಿಂದ ನಡೆಯುವವೆಂದು ತಿಳಿಯುತ್ತಾನೆ.									
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ